Skip to main content
Source
TV9kannada
https://tv9kannada.com/national/adr-says-five-regional-parties-declared-donations-of-rs-250-60-cr-through-electoral-bonds-in-2020-21-rak-au33-389860.html
Author
TV9Kannada Web Team
Date

ಚುನಾವಣಾ ಹಕ್ಕುಗಳ ಗುಂಪು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic Reforms- ADR) ಪ್ರಕಾರ, 2020-21ರಲ್ಲಿ ಚುನಾವಣಾ ಬಾಂಡ್‌ಗಳ (electoral bonds)ಮೂಲಕ ಐದು ಪ್ರಾದೇಶಿಕ ಪಕ್ಷಗಳು (regional parties) 250.60 ಕೋಟಿ ರೂಪಾಯಿ ಮೊತ್ತದ ದೇಣಿಗೆ ಪಡೆದಿವೆ ಎಂದು ಘೋಷಿಸಿವೆ.  ಎಡಿಆರ್‌ನ ಇತ್ತೀಚಿನ ವರದಿಯ ಪ್ರಕಾರ, 2020-21ರ ಹಣಕಾಸು ವರ್ಷದಲ್ಲಿ 31 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ 529.416 ಕೋಟಿ ರೂ.ಗಳಾಗಿದ್ದು, ಅವುಗಳ ಒಟ್ಟು ಘೋಷಿತ ವೆಚ್ಚ 414.028 ಕೋಟಿ ಆಗಿದೆ. ಡಿಎಂಕೆ (218.49 ಕೋಟಿ ರೂ.), ಟಿಡಿಪಿ (54.769 ಕೋಟಿ ರೂ.), ಎಐಎಡಿಎಂಕೆ (ರೂ. 42.37 ಕೋಟಿ), ಜೆಡಿಯು (ರೂ. 24.35 ಕೋಟಿ) ಮತ್ತು ಟಿಆರ್‌ಎಸ್ (ರೂ. 22.35 ಕೋಟಿ)- ಈ ಐದು ಪಕ್ಷಗಳು ಆ ವರ್ಷ ಅತಿ ಹೆಚ್ಚು ಖರ್ಚು ಮಾಡಿದ ಪಕ್ಷಗಳಾಗಿವೆ. ಪ್ರಮುಖ ಐದು ಪಕ್ಷಗಳ ಒಟ್ಟು ಆದಾಯ 434.255 ಕೋಟಿ ರೂ.ಗಳಾಗಿದ್ದು, ಒಟ್ಟಾರೆಯಾಗಿ ರಾಜಕೀಯ ಪಕ್ಷಗಳ ಒಟ್ಟು ಆದಾಯದ ಶೇ.82.03 ರಷ್ಟಿದೆ ಎಂದು ವರದಿ ತಿಳಿಸಿದೆ. ಸ್ವಯಂಪ್ರೇರಿತ ಕೊಡುಗೆಗಳ ಅಡಿಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಯಿಂದ ತಮ್ಮ ಆದಾಯದ 250.60 ಕೋಟಿ ಅಥವಾ 47.34 ಪ್ರತಿಶತವನ್ನು ಸಂಗ್ರಹಿಸಿವೆ. ಆದರೆ , 2020-21 ಆರ್ಥಿಕ ವರ್ಷದಲ್ಲಿ ಇತರ ದೇಣಿಗೆಗಳು ಮತ್ತು ಕೊಡುಗೆಗಳು 126.265 ಕೋಟಿ ಅಥವಾ ಶೇಕಡಾ 23.85 ರಷ್ಟಿದೆ ಎಂದು ಅದು ಹೇಳಿದೆ. 31 ಪ್ರಾದೇಶಿಕ ಪಕ್ಷಗಳ ಪೈಕಿ ಕೇವಲ ಐದು ಮಾತ್ರ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಯನ್ನು ಘೋಷಿಸಿವೆ. 2020-21ರ ಹಣಕಾಸು ವರ್ಷದಲ್ಲಿ 31 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದಲ್ಲಿ ರೂ 84.64 ಕೋಟಿ ಅಥವಾ ಶೇ 15.99 ಬಡ್ಡಿ ಆದಾಯವಾಗಿದೆ ಎಂದು ವರದಿ ತಿಳಿಸಿದೆ.

31 ಪಕ್ಷಗಳ ಪೈಕಿ 29 ಪಕ್ಷಗಳ ಒಟ್ಟು ಆದಾಯವು 2019-20ರ ಹಣಕಾಸು ವರ್ಷದಲ್ಲಿ 800.26 ಕೋಟಿ ರೂ. ಆಗಿತ್ತು. 2020-21ರ ಹಣಕಾಸು ವರ್ಷದಲ್ಲಿ ಇದು  520.492 ಕೋಟಿ ರೂ.ಗೆ ಇಳಿಕೆಯಾಗಿದೆ. ಅಂದರೆ ಶೇ.34.96ರಷ್ಟು ಕುಸಿತವಾಗಿದೆ. 2020-21 ಆರ್ಥಿಕ ವರ್ಷಕ್ಕೆ 17 ಪ್ರಾದೇಶಿಕ ಪಕ್ಷಗಳು ತಮ್ಮ ಆದಾಯದ ಒಂದು ಭಾಗವನ್ನು ಖರ್ಚು ಮಾಡದೆ ಉಳಿಸಿವೆ ಎಂದು ಘೋಷಿಸಿವೆ ಎಂದು ಎಡಿಆರ್ ಹೇಳಿದೆ.

ರಾಷ್ಟ್ರೀಯ ಪಕ್ಷಗಳಲ್ಲಿ, 2020-21ರ ಬಿಜೆಪಿಯ ಆಡಿಟ್ ವರದಿಯು ಈ ವರದಿಯನ್ನು ಸಿದ್ಧಪಡಿಸುವ ಸಮಯದಲ್ಲಿ ಇಸಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿಲ್ಲ ಎಂದು ಎಡಿಆರ್ ಹೇಳಿದೆ.