Skip to main content
Source
Prajavani
https://www.prajavani.net/india-news/adr-report-said-72-percent-of-bihar-ministers-face-criminal-cases-963986.html
Date
City
Patna

ಬಿಹಾರದ ಮಹಾ ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟದಲ್ಲಿ ಶೇ 72ರಷ್ಟು ಸಚಿವರು ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳವರು ಎಂಬುದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿಯಿಂದ ತಿಳಿದುಬಂದಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿರುವ ಜೆಡಿ(ಯು) ನಾಯಕ ನಿತೀಶ್ ಕುಮಾರ್, ಆರ್‌ಜೆಡಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದಾರೆ. ಹೊಸ ಸರ್ಕಾರದ ಸಚಿವ ಸಂಪುಟ ಮಂಗಳವಾರ ಪದಗ್ರಹಣ ಮಾಡಿದ್ದು, 31 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿತೀಶ್ ಹಾಗೂ ತೇಜಸ್ವಿ ಆಗಸ್ಟ್ 10ರಂದೇ ಅಧಿಕಾರ ಸ್ವೀಕರಿಸಿದ್ದರು.

ಒಟ್ಟು 33 ಮಂದಿ ಸಚಿವರ ಪೈಕಿ 32 ಸಚಿವರ ಅಫಿಡವಿಟ್‌ಗಳ (2020ರ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್) ಪರಿಶೀಲನೆ ನಡೆಸಿರುವ ಎಡಿಆರ್‌ ಹಾಗೂ ಬಿಹಾರ ಚುನಾವಣಾ ವಿಚಕ್ಷಣಾ ದಳ ವರದಿ ಸಿದ್ಧಪಡಿಸಿವೆ.

ಸಚಿವ, ಜೆಡಿ(ಯು) ಮುಖಂಡ ಅಶೋಕ್ ಚೌಧರಿ ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯರಾಗಿದ್ದರಿಂದ ಅಫಿಡವಿಟ್ ಸಲ್ಲಿಸಿಲ್ಲ. ಹೀಗಾಗಿ ಅವರ ಕುರಿತ ವಿವರಗಳು ಲಭ್ಯವಿಲ್ಲ ಎಂದು ಎಡಿಆರ್‌ ವರದಿ ತಿಳಿಸಿದೆ.

ವರದಿಯ ಪ್ರಕಾರ, 23 ಮಂದಿ ಸಚಿವರು ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದ್ದಾರೆ. 17 ಮಂದಿ ಸಚಿವರು (ಶೇ 53ರಷ್ಟು) ತಮ್ಮ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.

32 ಮಂದಿ ಸಚಿವ ಪೈಕಿ 27 ಜನ (ಶೇ 84ರಷ್ಟು) ಕೋಟ್ಯಧಿಪತಿಗಳಾಗಿದ್ದಾರೆ. 32 ಸಚಿವರ ಸರಾಸರಿ ಆಸ್ತಿ/ಸ್ವತ್ತಿನ ಮೌಲ್ಯ ₹5.82 ಕೋಟಿ ಎಂದು ಲೆಕ್ಕಹಾಕಲಾಗಿದೆ.

ಮಧುಬನಿ ಕ್ಷೇತ್ರದ ಸಮೀರ್ ಕುಮಾರ್ ಮಹಸೇಠ್ ಅತಿಹೆಚ್ಚು ಮೌಲ್ಯದ ಸ್ವತ್ತು ಹೊಂದಿದ ಸಚಿವರಾಗಿದ್ದಾರೆ. ಇವರ ಬಳಿ ₹24.45 ಕೋಟಿ ಮೌಲ್ಯದ ಸ್ವತ್ತು ಇದೆ. ಮುರಾರಿ ಪ್ರಸಾದ್ ಗೌತಮ್ ಅತಿ ಕಡಿಮೆ ಸ್ವತ್ತು (₹17.66 ಲಕ್ಷ) ಹೊಂದಿರುವ ಸಚಿವರಾಗಿದ್ದಾರೆ.

‘ಮಹಾ ಮೈತ್ರಿಕೂಟ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಹೆಚ್ಚಿದ್ದಾರೆ. ಸಂಪುಟವು ಸಾಮಾಜಿಕ ಅಸಮಾನತೆಯಿಂದ ಕೂಡಿದೆ’ ಎಂದು ಬಿಜೆಪಿ ಮಂಗಳವಾರ ಟೀಕಿಸಿತ್ತು.