Skip to main content
Source
Vijayavani
https://www.vijayavani.net/s-72-per-cent-of-bihar-ministers-face-criminal-cases/
Author
ವಿಜಯವಾಣಿ ಸುದ್ದಿಜಾಲ
Date
City
Patna

ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು ಆರ್​ಜೆಡಿ, ಕಾಂಗ್ರೆಸ್ ಹಾಗೂ ಇತರ ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ನಿತೀಶ್​ ಕುಮಾರ್​ ಸರ್ಕಾರದ ಬಹುದೊಡ್ಡ ಶಾಕಿಂಗ್​ ನ್ಯೂಸ್​ ಇದೀಗ ಹೊರಬಂದಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ 23 ಸಚಿವರ ಪೈಕಿ 17 ಮಂದಿಯ ಮೇಲೆ ಕ್ರಿಮಿನಲ್​ ಕೇಸ್​ ಇರುವುದು ಬಹಿರಂಗಗೊಂಡಿದೆ!

ನಿನ್ನೆಯಷ್ಟೇ ನಿತೀಶ್​ ಕುಮಾರ್ ಬಿಹಾರದಲ್ಲಿ ಹೊಸ ಸರ್ಕಾರ ರಚಿಸಿದ್ದಾರೆ. 31 ಶಾಸಕರು. ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ಆರ್​ಜೆಡಿಯ 16, ಜೆಡಿಯುನ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಪಡೆದಿದ್ದಾರೆ. ಉಳಿದಂತೆ ಕಾಂಗ್ರೆಸ್​​ನ ಇಬ್ಬರು ಹಾಗೂ ಹಿಂದೂಸ್ತಾನ ಅವಾನಿ ಮೋರ್ಚಾದ ಓರ್ವ ಶಾಸಕನಿಗೆ ಸಚಿವ ಸ್ಥಾನ ಸಿಕ್ಕಿದೆ.

ಇದರ ಬೆನ್ನಲ್ಲೇ ಇಂಥದ್ದೊಂದು ಶಾಕಿಂಗ್​ ನ್ಯೂಸ್​ ಕೊಟ್ಟಿರುವುದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR). ಇದು ನಡೆಸಿರುವ ಸಮೀಕ್ಷೆಯಿಂದ ಈ ಮಾಹಿತಿ ಹೊರಬಂದಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಸಹ ಪ್ರಕರಣ ದಾಖಲಾಗಿರುವುದಾಗಿ ಎಡಿಆರ್​ ತಿಳಿಸಿದೆ. ಕುತೂಹಲದ ಸಂಗತಿ ಎಂದರೆ ಹೊಸ ಕಾನೂನು ಸಚಿವ ಕಾರ್ತಿಕೇಯ ಸಿಂಗ್​ ವಿರುದ್ಧ ಅಪಹರಣ ಕೇಸ್​ ದಾಖಲಾಗಿದೆ. 2014ರಲ್ಲಿ ಬಿಲ್ಡರ್​ ಒಬ್ಬರನ್ನು ಕೊಲೆ ಮಾಡುವ ಸಂಬಂಧ ಅಪಹರಿಸಿರುವ ಆರೋಪ ಇವರ ಮೇಲಿದೆ. ಆದರೆ ಇದು ತಮಗೆ ಗೊತ್ತೇ ಇಲ್ಲ ಎಂದಿದ್ದಾರೆ ನಿತೀಶ್​ ಕುಮಾರ್​. ಈ ಮಾಹಿತಿ ಪ್ರಕಾರ 23 ಸಚಿವರ ಪೈಕಿ 17 ಮಂತ್ರಿಗಳ ವಿರುದ್ಧ ಗಂಭೀರ ಕ್ರಿಮಿನಲ್​ ಆರೋಪಗಳಿವೆ.

ಸಚಿವರ ಆಸ್ತಿ ಹಾಗೂ ಶೈಕ್ಷಣಿಕ ಅರ್ಹತೆಗಳ ವಿವರಗಳ ಬಗ್ಗೆಯೂ ಮಾಹಿತಿ ನೀಡಿದೆ ಎಡಿಆರ್​. ಬಿಹಾರದ ಒಟ್ಟು 31 ಸಚಿವರ ಪೈಕಿ 27 ಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಇವರ ಆಸ್ತಿ ಸರಾಸರಿ 5.82 ಕೋಟಿ ರೂಪಾಯಿ ಆಗಿದೆ. ನಿನ್ನೆ ಅಧಿಕಾರ ಸ್ವೀಕರಿಸಿದ ಎಂಟು ಸಚಿವರ ಶೈಕ್ಷಣಿಕ ಅರ್ಹತೆ 8ರಿಂದ 12ನೇ ತರಗತಿಯ ನಡುವೆ ಇದೆ. ಆದರೆ, ಉಳಿದ ಸಚಿವರು ಪದವೀಧರರು ಅಥವಾ ಅದಕ್ಕಿಂತಲೂ ಹೆಚ್ಚಿನ ಶೈಕ್ಷಣಿಕ ಅರ್ಹತೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)