Date
ಜೈಪುರ: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಂದಿದ್ದು, ಈಗ ಆಯ್ಕೆಯಾಗಿರುವ ಹೊಸ ಶಾಸಕರದ್ದೇ ಚರ್ಚೆ. ಹೊಸ ಶಾಸಕರ ಹಿನ್ನೆಲೆ ವಿವರಗಳನ್ನು ನೀಡಿರುವ ಎಡಿಆರ್ ವರದಿ, ರಾಜಸ್ಥಾನದಲ್ಲಿ 158 ಶಾಸಕರು ಕರೋಡ್ ಪತಿಗಳಾಗಿದ್ದಾರೆ ಎನ್ನುತ್ತಿದೆ.
ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾಗಿರುವ 199 ಶಾಸಕರ ಪೈಕಿ 158 ಶಾಸಕರು ಕರೋಡ್ ಪತಿಗಳಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕರೋಡ್ ಪತಿ ಶಾಸಕರು ಆಯ್ಕೆಯಾಗಿದ್ದಾರೆ.
2013 ರ ವಿಧಾನಸಭಾ ಚುನಾವಣೆ ಯಲ್ಲಿ 145 ಕರೋಡ್ ಪತಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್ ನ 82 ಶಾಸಕರು, ಬಿಜೆಪಿಯ 58 ಶಾಸಕರು. 11 ಪಕ್ಷೇತರ ಶಾಸಕರು, 5 ಬಿಎಸ್ ಪಿ ಶಾಸಕರು ತಮ್ಮ ಆಸ್ತಿಯ ಮೌಲ್ಯವನ್ನು ಒಂದು ಕೋಟಿಗೂ ಹೆಚ್ಚು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ವರದಿ ಮೂಲಕ ತಿಳಿದುಬಂದಿದೆ.
ಕಾಂಗ್ರೆಸ್ ನ ಶಾಸಕ ಪರಸ್ ರಾಮ್ ಮೋರ್ಡಿಯಾ (172 ಕೋಟಿ) ಹಾಗೂ ಉದಯ್ ಲಾಲ್ ಅಂಜನ (107 ಕೋಟಿ) ಪಕ್ಷೇತರ ಅಭ್ಯರ್ಥಿ ರಾಮ್ಕೇಶ್ ಮೀನಾ (39 ಕೋಟಿ ರೂಪಾಯಿ) ಆಸ್ತಿ ಘೋಷಿಸಿಕೊಂಡಿದ್ದಾರೆ. ಕರೋಡ್ ಪತಿ ಶಾಸಕರ ಪೈಕಿ ಅತಿ ಕಿರಿಯ ಶಾಸಕ ರಾಜ್ ಕುಮಾರ್ ರೌಟ್, ಮುಖೇಶ್ ಕುಮಾರ್ ಭಕರ್ ಹಾಗೂ ರಾಮ್ನಿವಾಸ್ ಗವ್ರಿಯಾ ಸಹ ಇದ್ದಾರೆ.