Skip to main content
Source
The Federal
https://karnataka.thefederal.com/whats-brewing/only-12-phase-5-poll-candidates-women-23-face-criminal-cases-adr-122083#google_vignette
Author
The Federal
Date

ಅಭ್ಯರ್ಥಿಗಳಲ್ಲಿ ಶೇ.23 ಮಂದಿ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ. ರಾಜಕೀಯದಲ್ಲಿ ಅಪರಾಧೀಕರಣ ತಡೆಗೆ ಎಡಿಆರ್‌ ಹಲವು ಶಿಫಾರಸು ಮಾಡಿದೆ

ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರ ನಿಕೃಷ್ಟ ಪ್ರಾತಿನಿಧ್ಯ ಮುಂದುವರಿದಿದೆ. ಮೇ 20 ರಂದು ನಡೆಯಲಿರುವ ಐದನೇ ಹಂತದ ಅಭ್ಯರ್ಥಿಗಳಲ್ಲಿ ಕೇವಲ ಶೇ.12 ರಷ್ಟು ಮಹಿಳೆಯರು ಮಾತ್ರ ಇದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಣೆ ಬಹಿರಂಗಪಡಿಸಿದೆ.

695 ಅಭ್ಯರ್ಥಿಗಳಲ್ಲಿ ಮಹಿಳೆಯರ ಸಂಖ್ಯೆ 82 ಮಾತ್ರ. ಮೊದಲ ಹಂತದ ಚುನಾವಣೆಯಲ್ಲಿ 135 (ಶೇ. 8), ಎರಡನೇ ಹಂತದಲ್ಲಿ 100 (ಶೇ. 8), ಮೂರನೇ ಹಂತದಲ್ಲಿ 123 (ಶೇ. 9) ಹಾಗೂ ನಾಲ್ಕನೇ ಹಂತದಲ್ಲಿ 170 (ಶೇ.10) ಮಹಿಳೆಯರು ಕಣದಲ್ಲಿದ್ದಾರೆ.

ಕ್ರಿಮಿನಲ್ ಪ್ರಕರಣ: ಎಡಿಆರ್ ವಿಶ್ಲೇಷಣೆ ಪ್ರಕಾರ, ಸುಮಾರು ಶೇ. 23 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮತ್ತು ಶೇ. 18 ರಷ್ಟು ಮಂದಿ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಐದನೇ ಹಂತದಲ್ಲಿ 695 ಅಭ್ಯರ್ಥಿಗಳ ಪೈಕಿ 122 ಮಂದಿ ಕೊಲೆ, ಕೊಲೆ ಯತ್ನ, ಮಹಿಳೆಯರ ವಿರುದ್ಧದ ಅಪರಾಧಗಳು ಮತ್ತು ದ್ವೇಷ ಭಾಷಣ ಸೇರಿದಂತೆ ಗಂಭೀರ ಕ್ರಿಮಿನಲ್ ಆರೋಪ ಎದುರಿಸು ತ್ತಿದ್ದಾರೆ. ಮೂವರು ಅಭ್ಯರ್ಥಿಗಳು ಶಿಕ್ಷೆಯಾಗಿದೆ ಎಂದು ಘೋಷಿಸಿಕೊಂಡಿದ್ದಾರೆ.

ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಐದನೇ ಹಂತದ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಆರ್ಥಿಕ ವಿವರ, ಶಿಕ್ಷಣ ಮತ್ತು ಲಿಂಗ ಕುರಿತ ಮಾಹಿತಿಯನ್ನು ಸ್ವಯಂಪ್ರಮಾಣಪತ್ರಗಳಿಂದ ಪಡೆದುಕೊಂಡಿದೆ. ವರದಿ ಪಕ್ಷವಾರು ಅಪರಾಧ ಪ್ರಕರಣಗಳ ವಿವರವನ್ನು ಕೂಡ ನೀಡಿದೆ. ಎಐಎಂಐಎಂನ ನಾಲ್ಕು ಅಭ್ಯರ್ಥಿಗಳಲ್ಲಿ ಇಬ್ಬರು (ಶೇ. 50), ಎಸ್‌ಪಿಯ 10 ಅಭ್ಯರ್ಥಿಗಳಲ್ಲಿ ನಾಲ್ಕು (ಶೇ. 40), ಕಾಂಗ್ರೆಸ್‌ನ 18 ಅಭ್ಯರ್ಥಿಗಳಲ್ಲಿ ಏಳು (ಶೇ. 39), ಶಿವಸೇನೆಯ ಆರು ಮಂದಿಯಲ್ಲಿ ಇಬ್ಬರು (ಶೇ. 33), ಬಿಜೆಪಿಯ 40 ಅಭ್ಯರ್ಥಿಗಳಲ್ಲಿ 12 (ಶೇ. 30), ಟಿಎಂಸಿಯ ಏಳು ಅಭ್ಯರ್ಥಿಗಳಲ್ಲಿ ಇಬ್ಬರು (ಶೇ. 29), ಆರ್‌ಜೆಡಿಯ ನಾಲ್ಕು ಅಭ್ಯರ್ಥಿಗಳಲ್ಲಿ ಒಬ್ಬರು (ಶೇ. 25) ಮತ್ತು ಶಿವಸೇನೆಯ (ಯುಬಿಟಿ) ಎಂಟು ಅಭ್ಯರ್ಥಿಗಳಲ್ಲಿ ಒಬ್ಬರು (ಶೇ. 13) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆ ಘೋಷಿಸಿಕೊಂಡಿದ್ದಾರೆ.

ಮಹಿಳೆಯರ ವಿರುದ್ಧದ ಅಪರಾಧ: ಎಡಿಆರ್ ವರದಿ ಪ್ರಕಾರ, 29 ಅಭ್ಯರ್ಥಿಗಳು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ. ಇವರಲ್ಲಿ ಒಬ್ಬರು ಅತ್ಯಾಚಾರ (ಐಪಿಸಿ ಸೆಕ್ಷನ್ 376) ಮತ್ತು 10 ಜನ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣ ಘೋಷಿಸಿಕೊಂಡಿದ್ದಾರೆ.

ಶಿಕ್ಷಣ, ಆಸ್ತಿ, ಸಾಲ: ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಕೂಡ ಕಳವಳ ಉಂಟುಮಾಡುವಂತಿದೆ. ಶೇ.42 ರಷ್ಟು ಮಂದಿ 5 ನೇ ಮತ್ತು 12 ನೇ ತರಗತಿ ನಡುವಿನ ವಿದ್ಯಾರ್ಹತೆ, ಶೇ. 50 ಮಂದಿ ಪದವೀಧರರು ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ. 26 ಅಭ್ಯರ್ಥಿಗಳು ಡಿಪ್ಲೊಮಾ, 20 ಮಂದಿ ಕೇವಲ ಸಾಕ್ಷರರು ಮತ್ತು ಐವರು ಅನಕ್ಷರಸ್ಥರು ಇದ್ದಾರೆ ಎಂದು ಎಡಿಆರ್ ಹೇಳಿದೆ.

ಶೇ.33 ರಷ್ಟು ಅಭ್ಯರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಅಭ್ಯರ್ಥಿಗಳ ಸರಾಸರಿ ಆಸ್ತಿ 3.56 ಕೋಟಿ ರೂ. ಅತಿ ಹೆಚ್ಚು ಆಸ್ತಿ ಹೊಂದಿರುವ ಮೂವರು 110 ಕೋಟಿ ರೂ.ಗಳಿಂದ 212 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಶೇ. 47 ರಷ್ಟು ಅಭ್ಯರ್ಥಿ ಗಳು ಸಾಲವನ್ನು ಘೋಷಿಸಿದ್ದಾರೆ. ಕೆಲವರು ಹತ್ತಾರು ಕೋಟಿ ರೂ.ಗಿಂತ ಅಧಿಕ ಸಾಲದ ಹೊರೆ ಹೊಂದಿದ್ದಾರೆ.

ರಾಜಕೀಯದಲ್ಲಿ ಅಪರಾಧೀಕರಣ ಸಮಸ್ಯೆಯನ್ನು ಪರಿಹರಿಸಲು ಎಡಿಆರ್ ಹಲವಾರು ಶಿಫಾರಸುಗಳನ್ನು ಮುಂದಿಟ್ಟಿದೆ; ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಅಭ್ಯರ್ಥಿಗಳ ಶಾಶ್ವತ ಅನರ್ಹತೆ, ಕಳಂಕಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪಕ್ಷಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸುವುದು ಮತ್ತು ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ತರುವುದು ಸೇರಿದೆ.