Skip to main content
Date

ನವದೆಹಲಿ: ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ಬಿಜೆಪಿ ಸಲ್ಲಿಸಿರುವ ದಾಖಲೆಗಳ ಪ್ರಕಾರ 2018–19ರಲ್ಲಿ ಆರ್ಥಿಕ ವರ್ಷದಲ್ಲಿ ₹ 742 ಕೋಟಿ ದೇಣಿಗೆ ಸಂಗ್ರಹಿಸಿದೆ. ಇದೇ ವೇಳೆ ಕಾಂಗ್ರೆಸ್‌ 148 ಕೋಟಿ ದೇಣಿಗೆ ಸಂಗ್ರಹಿಸಿದೆ ಎಂದು ಅಸೋಸಿಯೇಷನ್‌ ಆಫ್‌ ಡೆಮಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ತಿಳಿಸಿದೆ.  

2017–18ರಲ್ಲಿ ₹437.04 ಕೋಟಿ ಇದ್ದ ಬಿಜೆಪಿಯ ದೇಣಿಗೆ ಸಂಗ್ರಹಣೆ ಪ್ರಮಾಣವು, 2018–19ರ ಹೊತ್ತಿಗೆ ₹742.15ಗೆ ಏರಿದೆ. ಇದು ಶೇ. 70 ರಷ್ಟು ಹೆಚ್ಚಳ ಎಂದು ಎಡಿಆರ್‌ ತಿಳಿಸಿದೆ. 

ಇನ್ನು 2017–18ರಲ್ಲಿ ₹26 ಕೋಟಿ ಇದ್ದ ಕಾಂಗ್ರೆಸ್‌ನ ದೇಣಿಗೆ ಸಂಗ್ರಹ, 2018–19ರಲ್ಲಿ 148.58 ಆಗಿದೆ. ಇದು ಶೇ. 457 ರಷ್ಟು ಏರಿಕೆ. ಆದರೆ, 2016–17 ರಿಂದ 2017–18ರ ಅವಧಿಯಲ್ಲಿ ಪಕ್ಷ ಶೇ. 36ರಷ್ಟು ಸಂಗ್ರಹಣೆಯಲ್ಲಿ ಕುಸಿತ ಕಂಡಿದೆ ಎಂದೂ ಎಡಿಆರ್‌ ಹೇಳಿಕೊಂಡಿದೆ. 

ಒಟ್ಟು 4483 ದೇಣಿಗೆಗಳಿಂದ ಬಿಜೆಪಿ ₹742 ಕೋಟಿ ಹಣ ಸಂಗ್ರಹಿಸಿದೆ. 605 ದೇಣಿಗೆಗಳಿಂದ ಕಾಂಗ್ರೆಸ್‌ ₹148 ಕೋಟಿ ಹಣ ಸಂಗ್ರಹಣೆ ಮಾಡಿದೆ. ಇದೆಲ್ಲವೂ 20 ಸಾವಿರಕ್ಕೂ ಮಿಗಿಲಾದ ದೇಣಿಗೆಗಳನ್ನು ಮಾತ್ರ ಒಳಗೊಂಡಿದೆ ಎಂದು ಎಡಿಆರ್‌ ತಿಳಿಸಿದೆ. 

1575 ಕಾರ್ಪೊರೇಟ್‌/ಉದ್ಯಮಿಗಳಿಂದ ಬಿಜೆಪಿಗೆ ₹698.092 ಕೋಟಿ ಹಣ ಸಂಗ್ರಹವಾಗಿದ್ದರೆ, 2741 ವೈಯಕ್ತಿಕ ದೇಣಿಗಗಳಿಂದ 41.70 ಕೋಟಿ ಹಣ ಬಂದಿದೆ ಎಂದೂ ಎಡಿಆರ್‌ ತಿಳಿಸಿದೆ.