Skip to main content
Date

 ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ 23 ಅಭ್ಯರ್ಥಿಗಳು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ನಮ್ಮ ಮೇಲಿವೆ ಎಂದು ಅಫಿಡವಿಟ್​ನಲ್ಲಿ ಘೋಷಿಸಿದ್ದಾರೆ.

ಹಿಂಸೆ, ಮನಸ್ಸಿಗೆ ಘಾಸಿ ಉಂಟು ಮಾಡುವುದು, ಮಹಿಳೆಯರ ಗೌರವಕ್ಕೆ ಕುಂದು ತರುವ ನಡವಳಿಕೆ, ಮಹಿಳೆ ಮೇಲೆ ಬಲಾತ್ಕಾರ, ವ್ಯಭಿಚಾರಕ್ಕೀಡು ಮಾಡುವುದು, ಪತಿ ಅಥವಾ ಪತಿ ಸಂಬಂಧಿಕರು ಆಕೆಯೊಡನೆ ಕ್ರೂರವಾಗಿ ವರ್ತಿಸುವುದು ಇತ್ಯಾದಿ ಪ್ರಕರಣಗಳಲ್ಲಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರ್ರಕ್ ರಿಫಾಮ್್ಸರ್ (ಎಡಿಆರ್) ವರದಿ ಉಲ್ಲೇಖಿಸಿದೆ.

ಎಡಿಆರ್​ನ ರಾಷ್ಟ್ರೀಯ ಚುನಾವಣಾ ವೀಕ್ಷಣೆಯ ಸಂಸ್ಥಾಪಕ ಸದಸ್ಯ ಪ್ರೊ. ತ್ರಿಲೋಚನ್ ಶಾಸ್ತ್ರಿ ಮತ್ತು ರಾಜ್ಯ ಸಂಯೋಜಕ ಹರೀಶ್ ನರಸಪ್ಪ ಈ ವರದಿಯನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ವಿಶ್ಲೇಷಣೆಗೆ ಒಳಗಾದ 2560 ಅಭ್ಯರ್ಥಿಗಳಲ್ಲಿ 391(ಶೇ.15) ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ ಇರುವುದಾಗಿ ಹೇಳಿದ್ದಾರೆ. 254 (ಶೇ.10)ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. 4 ಅಭ್ಯರ್ಥಿಗಳ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣಗಳಿವೆ. 25 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ತಿಳಿಸಿದರು.

ಬಿಜೆಪಿಯ 83, ಕಾಂಗ್ರೆಸ್​ನ 59, ಜೆಡಿಎಸ್​ನ 41, ಸಂಯುಕ್ತ ಜನತಾದಳದ 25 ಅಭ್ಯರ್ಥಿಗಳಲ್ಲಿ 5, ಆಪ್ ಪಕ್ಷದ 27 ಅಭ್ಯರ್ಥಿಗಳಲ್ಲಿ 5, 1090 ಪಕ್ಷೇತರ ಅಭ್ಯರ್ಥಿಗಳಲ್ಲಿ 108 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇವೆ. ಅತಿ ಸೂಕ್ಷ್ಮ ಕ್ಷೇತ್ರಗಳು: ರಾಜ್ಯದ 224 ಕ್ಷೇತ್ರಗಳಲ್ಲಿ 56 (ಶೇ.25) ಕ್ಷೇತ್ರಗಳು ಸೂಕ್ಷ್ಮ ಕ್ಷೇತ್ರಗಳೆಂದು ಗುರುತಿಸಲಾಗಿದೆ.

447 ಮಂದಿ ಬಳಿ 5 ಕೋಟಿ ರೂ.ಗೂ ಹೆಚ್ಚು ಆಸ್ತಿ: 447 ಅಭ್ಯರ್ಥಿಗಳು 5 ಕೋಟಿ ರೂ. ಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. 252 ಅಭ್ಯರ್ಥಿಗಳು 2 ಕೋಟಿ ರೂ. ಗೂ ಹೆಚ್ಚು ಆಸ್ತಿ, 442 ಅಭ್ಯರ್ಥಿಗಳು 50 ಲಕ್ಷದಿಂದ 2 ಕೋಟಿ ರೂ.ವರೆಗಿನ ಆಸ್ತಿ ಹೊಂದಿದ್ದಾರೆ. 600 ಅಭ್ಯರ್ಥಿಗಳು 10 ಲಕ್ಷದಿಂದ 50 ಲಕ್ಷ ರೂ.ವರೆಗಿನ ಆಸ್ತಿ ಹೊಂದಿದ್ದಾರೆ. 819 ಅಭ್ಯರ್ಥಿಗಳು 10 ಲಕ್ಷ ರೂ.ಗೂ ಕಡಿಮೆ ಆಸ್ತಿ ಘೋಷಿಸಿಕೊಂಡಿದ್ದಾರೆ. ಒಟ್ಟು 2560 ಅಭ್ಯರ್ಥಿಗಳಲ್ಲಿ 883(ಶೇ.35) ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ.

ಪಕ್ಷವಾರು ಕೋಟ್ಯಧಿಪತಿಗಳು: ಬಿಜೆಪಿಯಲ್ಲಿ 208(ಶೇ.93), ಕಾಂಗ್ರೆಸ್​ನ 207(ಶೇ.94), ಜೆಡಿಎಸ್ 154(ಶೇ.77) ಸಂ.ದಳದ 13(ಶೇ.52), ಆಪ್​ನ 9 (ಶೇ.33) ಹಾಗೂ ಪಕ್ಷೇತರ 199(ಶೇ.18) ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ.

ಗಂಭೀರ ಕ್ರಿಮಿನಲ್ ಪ್ರಕರಣ

ಬಿಜೆಪಿಯ 58, ಕಾಂಗ್ರೆಸ್-32, ಜೆಡಿಎಸ್ -29, ಸಂ.ಜನತಾದಳ -3, ಆಪ್ ಪಕ್ಷದ 27 ಅಭ್ಯರ್ಥಿಗಳಲ್ಲಿ ಒಬ್ಬ, 1090 ಪಕ್ಷೇತರ ಅಭ್ಯರ್ಥಿಗಳಲ್ಲಿ 70 ಅಭ್ಯರ್ಥಿಗಳ ವಿರುದ್ಧ ಕೊಲೆ, ಕೊಲೆಯತ್ನ, ಅಪಹರಣ ಮುಂತಾದ ಗಂಭೀರ ಪ್ರಕರಣಗಳಿವೆ.

 

ಚುನಾವಣೆ ಸಿಬ್ಬಂದಿ ಗೌರವ ಧನ ಪರಿಷ್ಕರಣೆ

ಬೆಂಗಳೂರು: ಚುನಾವಣಾ ಕಾರ್ಯನಿರತ ಅಧಿಕಾರಿ, ಸಿಬ್ಬಂದಿಯ ಗೌರವಧನ ಪರಿಷ್ಕರಿಸಿ ಮುಖ್ಯ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮತಗಟ್ಟೆ ಅಧ್ಯಕ್ಷಾಧಿಕಾರಿ, ಎಣಿಕೆ ಮೇಲ್ವಿಚಾರಕ ದಿನಕ್ಕೆ 500 ರೂ., ಮತಗಟ್ಟೆ ಸಿಬ್ಬಂದಿ, ಎಣಿಕೆ ಸಹಾಯಕರಿಗೆ 350 ರೂ., ಲಘು ಉಪಹಾರ, ಊಟಕ್ಕೆ ಒಬ್ಬರಿಗೆ 200 ರೂ., ಗ್ರೂಪ್ ಡಿ ಸಿಬ್ಬಂದಿಗೆ 200 ರೂ., ವಿಎಸ್​ಟಿ, ಎಫ್​ಎಸ್​ಟಿ, ಎಸ್​ಎಸ್​ಟಿ, ಎಟಿ, ಇಇಎಂ, ಎಂಸಿಎಂಸಿ, ಎಂಸಿಸಿ, ದೂರು ನಿಯಂತ್ರಕರಣ ಕೊಠಡಿ ಸಿಬ್ಬಂದಿಗೆ ದಿನಕ್ಕೆ 200 ರೂ., ಮತದಾನದ ದಿನದಂದು ಬಿಎಲ್​ಒಗಳಿಗೆ 350 ರೂ., ವಾಹನ ಚಾಲಕ ಸಿಬ್ಬಂದಿಗೆ ದಿನಕ್ಕೆ 300 ರೂ. ಹಾಗೂ ಎನ್​ಐಸಿ ಅಧಿಕಾರಿ, ಸಿಬ್ಬಂದಿಗೆ 400 ರೂ. ನಿಗದಿಪಡಿಸಿ ಪರಿಷ್ಕರಿಸಲಾಗಿದೆ.