Skip to main content
Source
Prajavani
https://www.prajavani.net/news/india-news/29-of-current-30-cms-are-crorepatis-adr-analysis-1031102.html
Author
ಪ್ರಜಾವಾಣಿ ವಾರ್
Date
City
New Delhi

ಆಂಧ್ರದ ಜಗನ್‌ ಆಗರ್ಭ ಶ್ರೀಮಂತ; ಬಂಗಾಳದ ಮಮತಾ ಕಡಿಮೆ ಆಸ್ತಿ ಒಡತಿ

ದೇಶದ 30 ಮುಖ್ಯಮಂತ್ರಿಗಳ ಪೈಕಿ 29 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳು. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ದೇಶದಲ್ಲೇ ಅತಿ ಸಿರಿವಂತ ಮುಖ್ಯಮಂತ್ರಿಯಾದರೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅತೀ ಕಡಿಮೆ ಮೊತ್ತದ ಆಸ್ತಿ ಹೊಂದಿರುವ ಮುಖ್ಯಮಂತ್ರಿ ಎನಿಸಿದ್ದಾರೆ.

ಇವರು ಸಲ್ಲಿಸಿರುವ ಚುನಾವಣಾ ಅಫಿಡವಿಟ್‌ಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್‌) ಮತ್ತು ಎಲೆಕ್ಷನ್‌ ವಾಚ್‌ (ಎನ್‌ಇಡಬ್ಲ್ಯು) ಜಂಟಿ ವಿಶ್ಲೇಷಣೆ ನಡೆಸಿದ ನಂತರ ಈ ಮಾಹಿತಿ ಬಹಿರಂಗಪಡಿಸಿವೆ.

29 ಮಂದಿ ಕೋಟ್ಯಧಿಪತಿ ಮುಖ್ಯಮಂತ್ರಿಗಳು ಸರಾಸರಿ ತಲಾ ಆಸ್ತಿ ₹33.96 ಕೋಟಿ ಆಗಿದೆ. ಇದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತಲಾ ₹3 ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಎಡಿಆರ್‌ ವರದಿಯಲ್ಲಿ ಹೇಳಿದೆ.

30 ಮಂದಿ ಮುಖ್ಯಮಂತ್ರಿಗಳಲ್ಲಿ 13 ಮುಖ್ಯಮಂತ್ರಿಗಳ ಮೇಲೆ ಗಂಭೀರ ಅಪರಾಧ ಪ್ರಕರಣಗಳಿವೆ. ಈ ಮುಖ್ಯಮಂತ್ರಿಗಳು ಚುನಾವಣಾ ಅಫಿಡವಿಟ್‌ನಲ್ಲಿ ಸಲ್ಲಿಸಿರುವ ಮಾಹಿತಿ ಪ್ರಕಾರ ಅವರ ಮೇಲೆ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಕ್ರಿಮಿನಲ್‌ ಬೆದರಿಕೆಯಂತಹ ಗಂಭೀರ ಅಪರಾಧ ಪ್ರಕರಣಗಳಿವೆ.

ಗಂಭೀರ ಕ್ರಿಮಿನಲ್‌ ಪ್ರಕರಣಗಳು ಜಾಮೀನು ರಹಿತ ಅಪರಾಧಗಳಾಗಿದ್ದು, ಐದು ವರ್ಷಗಳಿಗೂ ಹೆಚ್ಚಿನ ಜೈಲು ಶಿಕ್ಷೆ ವಿಧಿಸುವಂತಹವು ಎಂದು ವರದಿ ತಿಳಿಸಿದೆ.

ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪುದುಚೆರಿ ಹಾಗೂ 28 ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿದ್ದು, ಜಮ್ಮು ಮತ್ತು ಕಾಶ್ಮೀರ ಸದ್ಯ ಮುಖ್ಯಮಂತ್ರಿ ಹೊಂದಿರದ ಏಕೈಕ ಕೇಂದ್ರಾಡಳಿತ ಪ್ರದೇಶವಾಗಿದೆ.

ಅಂಕಿ ಅಂಶ

ಅತಿ ಹೆಚ್ಚು ಸಿರಿವಂತ ಪ್ರಮುಖ 3 ಸಿ.ಎಂಗಳು

ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ, ಆಂಧ್ರಪ್ರದೇಶ; ಒಟ್ಟು ಆಸ್ತಿ ₹510 ಕೋಟಿ

ಪ್ರೇಮ ಖಂಡು, ಅರುಣಾಚಲ ಪ್ರದೇಶ; ₹163 ಕೋಟಿ

ನವೀನ್‌ ಪಟ್ನಾಯಕ್‌, ಒಡಿಶಾ; ₹63 ಕೋಟಿ

ಅತಿ ಕಡಿಮೆ ಆಸ್ತಿವಂತ 3 ಸಿ.ಎಂಗಳು

ಮಮತಾ ಬ್ಯಾನರ್ಜಿ; ಪಶ್ಚಿಮ ಬಂಗಾಳ; ₹15 ಲಕ್ಷ

ಪಿಣರಾಯಿ ವಿಜಯನ್‌; ಕೇರಳ; ₹1 ಕೋಟಿ

ಮನೋಹರ್‌ ಲಾಲ್‌; ಹರಿಯಾಣ; ₹1 ಕೋಟಿ